ಎಲುಬು ಮಜ್ಜೆ

	ರಕ್ತದಲ್ಲಿ ಎರಡು ಭಾಗಗಳು. ಒಂದು ದ್ರವದ್ದು ಇನ್ನೊಂದು ಕಣಗಳಿದ್ದು. ದ್ರವ ಭಾಗಕ್ಕೆ ರಕ್ತರಸ (ಪ್ಲಾಸ್ಮಾ) ವೆನ್ನುತ್ತಾರೆ. ರಕ್ತಕಣಗಳಲ್ಲಿ ಅನೇಕ ವಿಧದ ಕಣಗಳಿವೆ. ಹಾಲ್‍ರಸಕಣ (ಲಿಂಫೋಸೈಟ) ಒಂದನ್ನು ಬಿಟ್ಟು ಉಳಿದ ಎಲ್ಲ ಬಗೆಯ ರಕ್ತಕಣಗಳು, ಚಪ್ಪಟಿಕಗಳು ಮೂಳೆಗಳ ಒಳಗಿನ ಪೊಳ್ಳುಗಳಲ್ಲಿರುವ ಮಜ್ಜೆ (ಮ್ಯಾರೋ)ಯಿಂದ ಜನಿಸುತ್ತವೆ. ಎಲುಮಜ್ಜೆಯು ಮೃದುವಾದ ಮೆತುವಾದ ಊತಕ. ಹಸುಗೂಸಿನ ತೂಕದಲ್ಲಿ ಸುಮಾರು 2.3 ಪ್ರತಿಶತದಷ್ಟು ಎಲುಮಜ್ಜೆ ಇರುತ್ತದೆ. ಬೆಳೆದಿರುವವರಲ್ಲಿ ಇದು ಎರಡು ಪಟ್ಟು ಹೆಚ್ಚಾಗುತ್ತದೆ. ಮಗುವಿನಲ್ಲಿ ಎಲುಮಜ್ಜೆಯ ಘನ ಅಳತೆ 65 ಮಿ.ಲೀ. ನಷ್ಟಿದ್ದು ದೊಡ್ಡವರಲ್ಲಿ 1.6 ರಿಂದ 3.2 ಲೀಟರುಗಳಷ್ಟಾಗುತ್ತದೆ. 

	ಮಜ್ಜೆಯಲ್ಲಿ ಕೊಬ್ಬಿನ ಊತಕ ಹೆಚ್ಚಾಗಿದ್ದರೆ ಹಳದಿಯಾಗಿ, ರಕ್ತ ತಯಾರಿಕ ಊತಕ ಹೆಚ್ಚಾಗಿದ್ದರೆ ಕೆಂಪಾಗಿ ತೋರುವುದು. ಸುಮಾರು ಏಳನೆಯ ವಯಸ್ಸಿನ ತನಕ ದೇಹದೊಳಗಿನ ಮಜ್ಜೆಯಲ್ಲಿ ಕೆಂಪಗೆ ಇರುತ್ತದೆ. ನಂತರ ಮಗು ಬೆಳೆದು ದೊಡ್ಡದಾದಂತೆ ಮಜ್ಜೆ ಕೊಬ್ಬುಗೂಡುವುದು ಹೆಚ್ಚಾಗುತ್ತ ಸಾಗುತ್ತದೆ. ಹೀಗಾಗಿ ಬೆಳೆದವರ ತಲೆಬುರುಡೆ, ಎದೆ ಚಕ್ಕೆ, ಪಕ್ಕೆಲುಗಳು, ಕೊರಳೆಲುಗಳು, ಬೆನ್ನುಗಂಬ ತೊಡೆಮೂಳೆ ಅಲ್ಲದೆ ತೋಳಿನ ಮೇಲ್ಕೊನೆಗಳಲ್ಲಿ ಮಾತ್ರ ಕೆಂಪು ಮಜ್ಜೆ ಉಳಿಯುತ್ತದೆ. ಅವಶ್ಯಕತೆಯ ಹಲವು ತುರ್ತಿನ ಹೊತ್ತುಗಳಲ್ಲ್ಲಿ ಹಳದಿ ಮಜ್ಜೆ ಕೆಂಪಾಗುತ್ತದೆ. ಯಾವುದೇ ಕಾರಣದಿಂದಾಗಿ ರಕ್ತ ತಯಾರಿಕೆಯ ಚಟುವಟಿಕೆ ಹೆಚ್ಚಿದಾಗಲೂ ಹಳದಿ ಮಜ್ಜೆ ಕೆಂಪಾಗುತ್ತದೆ.

	ನವಿರ್ಜಾಲಕ (ರೆಟಿಕ್ಯುಲಾರ) ತಂತುಗಳು ಬಲೆ ಹೆಣೆದಂತೆ ಹರಡಿರುತ್ತವೆ. ನವಿರ್ಜಾಲಕ ಜೀವಕಣಗಳು ಆ ತಂತುಗಳಿಗೆ ಅಡ್ಡ ಚಾಚಿಕೊಂಡು ಸ್ಪಂಜಿನಂತೆ ಕಾಣುತ್ತವೆ. ಈ ಚಿತ್ರ ಸೂಕ್ಷ್ಮದರ್ಶಕದಲ್ಲಿ ಕಾಣುತ್ತದೆ. ಎಲುಮಜ್ಜೆಯ ತುಂಬೆಲ್ಲ ಇವೆರಡರ ರಚನೆಗಳು ಕಂಡು ಬರುತ್ತದೆ. ನವಿರ್ಜಾಲ ಜೀವಕಣಗಳಲ್ಲಿ ಎರಡು ಬಗೆಯ ಕಣಗಳಿವೆ 1) ನೆಲೆಸಿದ ನಿಡುತೀನಿ ಕಣಗಳು (ಮ್ಯಾಕ್ರೋಫೆಜ್) ಮತ್ತು 2) ಮೂಲರೂಪದ ನವಿರ್ಜಾಲಕ ಕಣಗಳು. ನೆಲೆಸಿದ ನಿಡುತೀನಿಕಣಗಳು ರಕ್ತದ ಹರಿವಿನಿಂದ ಸಣ್ಣಪುಟ್ಟ ಚೂರುವಸ್ತುಗಳನ್ನು ಎತ್ತಿಕೊಂಡು ಕಬಳಿಸುತ್ತವೆ. ಮೂಲರೂಪದ ನವಿರ್ಜಾಲಕ ಕಣಗಳು ನಡುತೀನಿಕ ಕಣಗಳಾಗಿ ಬದಲಾಗಬಲ್ಲವು. ಇಲ್ಲವೆ ಸಾಧಾರಣ ರಕ್ತದ ಕಣಗಳಾಗಿ ಬೆಳೆಯಬಲ್ಲವು. ಬಲಿತ ಕೆಂಪುರಕ್ತಣಗಳು, ಹರಳುಗೂಡಿದ ಬಿಳಿ ರಕ್ತದ ಕಣಗಳಾಗಿ ಬೆಳೆಯಬಲ್ಲವು. ಬಲಿತ ಕೆಂಪು ರಕ್ತಕಣಗಳು, ಹರಳುಗೂಡಿದ ಬಿಳಿರಕ್ತ ಕಣಗಳಾದ “ಹರಳು ಕಣಗಳು” (ಗ್ರಾನ್ಯುಲೋಸೈಟ್ಸ್) ತಂತುಗಳ ಜೀವಕಣಗಳ ಬಲೆಯಲ್ಲಿ ಇರುತ್ತವೆ. ಮಜ್ಜೆಮೊಳೆಕಣ (ಮಯಲೋಬ್ಲಾಸ್ಟ್) ಮತ್ತು ಹಾಲುರಸಮೊಳೆಕಣ (ಲಿಂಫೊಬ್ಲಾಸ್ಟ್) ಒಂದೇ ತಾಯಿ ಕಣದಿಂದ ಜನಿಸಿದವೆಂಬ ವಾದ ಕೆಲವರು ಒಪ್ಪಿದರೆ ಇತರರು ಒಪ್ಪುವುದಿಲ್ಲ. ಎಲುಮಜ್ಜೆ ಮೂಲಕಣವು, ಹಾಲುರಸಕಣಗಳ ರೂಪದಲ್ಲಿ, ನಿಜಗೆಲಸದಲ್ಲಿ ಬೇರೆ ಬೇರೆ ಆಗಿರುವುದು ಇನ್ನೂವರೆಗೆ ಯಾರೂ ಸ್ಥಿರಪಡಿಸಿಲ್ಲ. ಹಾಲುರಸಮೊಳೆಕಣ ಮತ್ತು ಹಾಲುಕಣಗಳಲ್ಲಿ ಹೆಚ್ಚಿನ ವ್ಯತ್ಯಾಸಗಳು ಇಲ್ಲ. ಹೀಗಾಗಿ ಮೂಲಕಣಗಳಿಗೆ ರಕ್ತಮೊಳೆಕಣ (ಹೀಮೋಸೈಟೋಬ್ಲಾಸ್ಟ್) ಎಂದು ಕರೆದರೆ ಸಾಕು.

	ಎಲುಮಜ್ಜೆ ಮೂಲಕಣ ಕೆಂಪು ರಕ್ತಕಣವಾಗಿ ಬೆಳೆದಂತೆಲ್ಲ ಅದರ ಕಣರಸದಲ್ಲಿ (ಸೈಟೋಪ್ಲಾಸ್ಮ್) ರಕ್ತ ಬಣ್ಣಕ (ಹೀಮೋಗ್ಲಾಬಿನ್) ಕೂಡಿಕೊಳ್ಳುತ್ತದೆ. ಕೆಲವು ರಕ್ತಕಣದ ತಾಯಿಕಣದಲ್ಲಿ ನ್ಯೂಕ್ಲೀಯಿಕ್‍ಆಮ್ಲ, ರಕ್ತ ಬಣ್ಣಕಗಳಿರುತ್ತವೆ. ಆದರೆ ಬರುಬರುತ್ತ ನ್ಯೂಕ್ಲಿಯಕಾಮ್ಲದ ಬದಲಾಗಿ ರಕ್ತ ಬಣ್ಣಕವೇ ತುಂಬಿಕೊಳ್ಳುತ್ತದೆ. ಆಗ ನಡುಬೀಜದ (ನ್ಯೂಕ್ಲಿಯಸ್) ಬಣ್ಣವೇರಿ ದುಂಡಾಗಿ ಸಮೆನಕಣ (ನಾರ್ಮೊಬ್ಲಾಸ್ಟ್) ವಾಗುತ್ತದೆ. ಇದರೊಳಗಿರುವ ನಡುಬೀಜ ಕರಗಿ ಸಹಜವಾದ ನಡುಬೀಜವಿರದ ಕೆಂಪು ರಕ್ತಕಣವಾಗುತ್ತದೆ. 

	ಎಲುಮಜ್ಜೆಯ ಮೂಲಕಣದ ಕಣರಸದಲ್ಲಿ ಹರಳುಗಳು ಹುಟ್ಟಿಕೊಂಡು ನಡುಬೀಜದಲ್ಲೂ ಒಂದಿಷ್ಟು ಬದಲಾವಣೆಗಳಾಗಿ ಹರಳುಕಣಗಳು ಜನ್ಮ ತಾಳುತ್ತದೆ. ಅಂತ್ಯದಲ್ಲಿ ತಯಾರಾಗುವ ರಕ್ತದ ಬಿಳಿಕಣದ ಗುಣಲಕ್ಷಣಗಳಿಗೆ ತಕ್ಕಂತೆ ಅದರ ಹರಳುಗಳು ಕೆಂಪಾನುರಾಗಿಕ (ಇಯೋಸಿನೊಫಿಲ್); ಮಾರಾಮ್ಲಾನುರಾಗಿಕ (ಬೆಸೋಫಿಲ್) ಕಣಗಳಾಗುವವು. ಇವೆರಡೂ ಕಣಗಳು ಮಜ್ಜೆಕಣ (ಮಯಲೋಸೈಟ) ಗಳಿಂದ ರಚನೆಗೊಂಡಿರುತ್ತವೆ. (ಚಿತ್ರ - 3)

	ರಕ್ತದ ಜೀವಕಣಗಳ ಮತ್ತು ಕೊಬ್ಬಿನ ಜೀವಕಣಗಳ ನಡುವೆ ತೋರನಡುಬೀಜಕಣ (ಮೆಗಾಕ್ಯಾರಿಯೋಸೈಟ್ಸ್) ಗಳಿವೆ. ಬಹಳ ದೊಡ್ಡಗಾತ್ರದ ಈ ಜೀವಕಣಗಳ ಜೀವರಸ (ಪ್ರೋಟೊಪ್ಲಾಸ್ಮ)ದ ಸಣ್ಣ ಸಣ್ಣ ತುಣುಕುಗಳೇ ರಕ್ತದ ಚಪ್ಪಟಿಕಗಳಾಗುತ್ತವೆಂದು ನಂಬಿಕೆ ಇದೆ. 

	ಹೊಸದಾಗಿ ತಯಾರಾದ ಜೀವಕಣಗಳುಳ್ಳ ರಕ್ತಧಮನಿಗಳ ಮೂಲಕ ಎಲುಮಜ್ಜೆ ಸೇರುತ್ತದೆ. ಅಲ್ಲಿಂದ ಮುಂದೆ ತೆಳುಗೋಡೆ ಹೊಂದಿದ ದೊಡ್ಡ ನಾಳಗುಳಿಗಳ (ಸೈನುಸಾಯ್ಡ್‍ಸ್) ಮೂಲಕ ಸಿರಗಳೊಳಕ್ಕೆ (ವೇನ್ಸ) ರಕ್ತ ಹರಿಯುತ್ತದೆ. ಈ ನಾಳಗುಳಿಗಳ ಒಳಪೊರೆಯಲ್ಲಿ ನಿಡುತೀನಿಕಣದಂತೆ ಕಬಳಿಸುವ ನವಿರುಜಾಲಕಕಣಗಳಿರುತ್ತವೆ. ಈ ಜೀವಕಣಗಳು ಇಲ್ಲಿಂದ ದುಂಡಾಗಿ, ಬಿಡಿಯಾದ ನಿಡುತೀನಿಕಣಗಳಾಗಿ ನಾಳಗುಳಿಯೊಳಗೆ ಸೇರಿಕೊಳ್ಳಬಲ್ಲವು. 

	ಪರ್ವತಗಳ ಎತ್ತರದ ಏರಿನಲ್ಲಿ ಆಗುವಂತೆ ಉಸಿರಲ್ಲಿ ಆಮ್ಲಜನಕದ ಪ್ರಮಾಣ ತಗ್ಗಿದರೆ ಕೆಂಪುರಕ್ತ ಕಣಗಳು ಹೆಚ್ಚು ಹೆಚ್ಚಾಗಿ ತಯಾರಾಗುತ್ತವೆ. ಕೋಬಾಲ್ಟ್ ತೆರನ ಕೆಲವು ರಸಾಯನಿಕಗಳಿಂದಲೂ ಹೀಗಾಗುವುದು. ಕೆಲವು ರೋಗಗಳಲ್ಲಿ ಎಲುಮಜ್ಜೆಯಲ್ಲಿ ವಿಶಿಷ್ಟ ಬದಲಾವಣೆಗಳಾಗುವದು. ಇದನ್ನು ಕಂಡುಕೊಳ್ಳಲು ಎದೆ ಚಕ್ಕೆಯಲ್ಲಿ (ಸ್ಟರ್ನಂ) ತೂತಿಟ್ಟು ಸೂಜಿಯಿಂದ ಎಲುಬೊಳಗಿರುವ ಮಜ್ಜೆ ಹೀರಿ ತೆಗೆದು ಪರೀಕ್ಷಿಸುತ್ತಾರೆ.

	ಎಕ್ಸ್ ಕಿರಣಗಳು, ಪರಮಾಣುಬಾಂಬ್ ಸಿಡಿತದಿಂದಾಗುವ ವಿಕಿರಣತೆಯಿಂದ ಎಲುಮಜ್ಜೆಗೆ ಹಾನಿಯಾಗುತ್ತದೆ. ರಕ್ತದ ಜೀವಕಣಗಳ ಜನನ ಕುಂಠಿತಗೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ಎಲುಮಜ್ಜೆ ಪೂರಣ (ಬೋನ ಮ್ಯಾರೊ ಟ್ರಾಸ್ಸ್‍ಪ್ಲಾಂಟ) ಮಾಡಿದರೆ ಮಜ್ಜೆ ಚೇತರಿಸಿಕೊಂಡು ಮೊದಲಿನಂತಾಗುತ್ತದೆ. ಎಲುಮಜ್ಜೆಯಲ್ಲಿ ಕಾಣುವ ಕಾಂಡಕಣ (ಸ್ಟೆಮ್ ಸೆಲ್ಸ್) ಗಳನ್ನು ದಾನಿಗಳಿಂದ ಪಡೆದು ಸಂರಕ್ಷಿಸಿ ಶೇಖರಿಸಿಟ್ಟು ನಂತರ ಕೆಲವು ವಿಶಿಷ್ಠ ಚಿಕಿತ್ಸೆಯಲ್ಲಿ ಪೂರಣ ಮಾಡಿ ಸಂತಸದಾಯಕ ಫಲಪಡೆಯುವಲ್ಲಿ ವಿಜ್ಞಾನಿಗಳು ಯಶಸ್ಸು ಪಡೆದಿದ್ದಾರೆ.
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ